ಬಾಲ್‍ಫೋರ್, ಆರ್ಥರ್ ಜೇಮ್ಸ್
1848-1930. ಬ್ರಿಟಿಷ್ ರಾಜನೀತಿಜ್ಞ ಮತ್ತು ತತ್ವಶಾಸ್ತ್ರಜ್ಞ. ಬ್ರಿಟಿಷ್ ಪ್ರಧಾನಮಂತ್ರಿ (1902-05). ಸುಮಾರು ಅರ್ಧ ಶತಮಾನ ಕಾಲ ಕನ್ಸರ್ವೇಟಿವ್ ಪಕ್ಷದ ಧುರೀಣನಾಗಿದ್ದ. 1848 ಜುಲೈ 25ರಂದು ಸ್ಕಾಟ್ಲೆಂಡಿನ ಬೈಟಿಂಗ್ ಹ್ಯಾಮಿನಲ್ಲಿ ಜನನ. ಎಟಾನ್ ಮತ್ತು ಟ್ರಿನಿಟಿ ಕಾಲೇಜುಗಳಲ್ಲಿ ವ್ಯಾಸಂಗಮಾಡಿದ.

ಕನ್ಸರ್ವೇಟಿವ್ ಪಕ್ಷದ ಸದಸ್ಯನಾಗಿ ಹೌಸ್ ಆಫ್ ಕಾಮನ್ಸ್ ಸಭೆ ಪ್ರವೇಶಿಸಿದ (1874). ಸೋದರಮಾವ ಲಾರ್ಡ್‍ಸ್ಯಾಲಿಸ್‍ಬರಿಯ ಆಪ್ತಕಾರ್ಯದರ್ಶಿಯಾಗಿ ಬರ್ಲಿನ್ ಕಾಂಗ್ರೆಸ್ಸಿನಲ್ಲಿ ಭಾಗವಹಿಸಿದ (1878). ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷ (1885), ಸ್ಕಾಟ್ಲೆಂಡಿನ ಕಾರ್ಯದರ್ಶಿ (1886), ಐರ್ಲೆಂಡಿನ ಮುಖ್ಯ ಕಾರ್ಯದರ್ಶಿ (1887-91), ಕೋಶಪ್ರಧಾನಿ (1895-1902) ಮುಂತಾದ ವಿವಿಧ ಹುದ್ದೆಗಳಲ್ಲಿದ್ದ, ಈತ ಪ್ರಧಾನಮಂತ್ರಿಯಾಗಿದ್ದಾಗ ದಕ್ಷಿಣ ಆಫ್ರಿಕ ಯುದ್ಧ ಕೊನೆಗೊಂಡಿತು, ಶಿಕ್ಷಣ ಸುಧಾರಣಾ ವಿಧೇಯಕವೊಂದು ಮಂಡಿತವಾಯಿತು. ಕಮಿಟಿ ಆಫ್ ಇಂಪೀರಿಯಲ್ ಡಿಫೆನ್ಸ್ ರೂಪುಗೊಂಡಿತು. ಆಂಗ್ಲೊ-ಫ್ರೆಂಚ್ ಮೈತ್ರಿಕೂಡ ಏರ್ಪಟ್ಟಿತ್ತು (1904). ಇದಕ್ಕೆ ಅನುಗುಣವಾಗಿ ಈಜಿಪ್ಟಿನಲ್ಲಿ ಆಂಗ್ಲರ ಮತ್ತು ಮೊರಾಕೊದಲ್ಲಿ ಫ್ರೆಂಚರ ಸಾರ್ವಭೌಮತ್ವಗಳಿಗೆ ಮನ್ನಣೆ ದೊರಕಿತು. ಆಮದು ರಫ್ತು ಸುಂಕಕ್ಕೆ ಸಂಬಂಧಿಸಿದಂತೆ ಈತನ ಧೋರಣೆ ಅನಿಶ್ಚಿತವಾಗಿತ್ತು. ಪರಿಣಾಮವಾಗಿ ಈತ ತನ್ನ ಪಕ್ಷದ ಸಮೇತ ಪರಾಭವಗೊಂಡ. ಪಕ್ಷದಲ್ಲಿಯ ಅಂತರಿಕ ಬಿಕ್ಕಟ್ಟಿನಿಂದಾಗಿ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು (1911).

ಒಂದನೆಯ ಮಹಾಯುದ್ಧ ಆರಂಭವಾದಾಗ ರಚಿತವಾದ ಸಮ್ಮಿಶ್ರ ಸರ್ಕಾರ ಸೇರಿ (1915) ವಿದೇಶಾಂಗ ಸಚಿವನಾಗಿ ಕೆಲಸಮಾಡಿದ (1916-19). 1917ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ಭೇಟಿಕೊಟ್ಟ ಬ್ರಿಟಿಷ್ ನಿಯೋಗದ ನೇತೃತ್ವವಹಿಸಿದ. ಪ್ಯಾಲೆಸ್ಟ್ಯೆನಿನಲ್ಲಿ ಯೆಹೂದಿ ಸ್ವಾಸ್ಥ್ಯ ಚಳುವಳಿಗೆ ಬೆಂಬಲನೀಡಿ ಪ್ರಸಿದ್ಧನಾದ. 1920ರಲ್ಲಿ ಲೀಗ್ ಆಫ್ ನೇಷನ್ಸ್ ಮತ್ತು 1921-22ರಲ್ಲಿ ವಾಷಿಂಗ್‍ಟನ್ ನಿಶ್ಶಸ್ತ್ರೀಕರಣ ಸಮ್ಮೇಳನಗಳಲ್ಲಿ ಬ್ರಿಟಿಷ್ ಪ್ರತಿನಿಧಿಯಾಗಿ ಭಾಗವಹಿಸಿದ. ಬ್ರಿಟಿಷ್ ಅಕಾಡೆಮಿಯ ಅಧ್ಯಕ್ಷನೂ ಆಗಿದ್ದ (1921-28). ಈತನಿಗೆ ನೈಟ್ ಹಾಗೂ ಅರ್ಲ್ ಗೌರವ ಪದವಿ ಸಂದಿತು (1922). ಈತ ವಾಗ್ಮಿ ಮತ್ತು ಉತ್ತಮ ಲೇಖಕ. ಡಿಫೆನ್ಸ್ ಆಫ್ ಫಿಲಾಸಫಿಕ್ ಡೌಟ್ (1879). ದಿ ಫೌಂಡೇಶನ್ ಆಫ್ ಬಿಲೀಫ್ (1895) ಹಾಗೂ ಥೀಯಿಸಮ್ ಅಂಡ್ ಹ್ಯೂಮನಿಸಮ್ (1915) ಇವು ಈತನ ಗ್ರಂಥಗಳು.
1930 ಮಾರ್ಚ್ 19ರಂದು ಸರ್ರೆ ನಾಡಿನ ವರ್ಕಿಂಗ್ ಎಂಬಲ್ಲಿ ನಿಧನವಾದ.
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ